ಕುಂದಾಪುರ (ಮೇ.07): ಮಹಾಭಾರತ ಮತ್ತು ರಾಮಾಯಣದಲ್ಲಿ ಬರುವ ಉದಾತ್ತವಾದ ಮೌಲ್ಯಗಳು ಮತ್ತು ಪಾತ್ರಗಳ ಕುರಿತು ವಿದ್ಯಾರ್ಥಿಗಳು ತರ್ಕಬದ್ಧವಾಗಿ ಚಿಂತಿಸಬೇಕು. ವಿಕಾಸಶೀಲ ಮಹಾಕಾವ್ಯಗಳಾದ ಈ ಕೃತಿಗಳಲ್ಲಿ ಬರುವ ಪಾತ್ರಗಳ ಆದರ್ಶಗಳಲ್ಲಿ ಮೌಲ್ಯ ಅಡಗಿದೆ. ಈ ಮೌಲ್ಯಗಳೇ ಬದುಕಿಗೆ ದೀವಿಗೆ. ವಿದ್ಯಾರ್ಥಿಗಳು ಸಂವೇದನಾಶೀಲ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಹೊಸಂಗಡಿ ಪದವಿ – ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಣಜಿತ್ ಶೆಟ್ಟಿ ಮೂಡುಬಗೆ ಹೇಳಿದರು.

ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಆಶ್ರಯದಲ್ಲಿ ಆಯೋಜಿಸಿದ ಜೀವನ ಮೌಲ್ಯ ಉಪನ್ಯಾಸ ಮಾಲಿಕೆ -8 ರ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಮತ್ತು ಶ್ರೀಮತಿ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ರಾಜೇಶ್ವರಿ ಸ್ವಾಗತಿಸಿ, ಖುಷಿ ಅತಿಥಿಗಳನ್ನು ಪರಿಚಯಿಸಿ, ನಿರೀಕ್ಷಾ ವಂದಿಸಿ, ನಮನ ಜಿ. ನಿರೂಪಿಸಿದರು.










