ಕುಂದಾಪುರ(ಜೂ ,03): ತಾಲೂಕಿನ ಹಟ್ಟಿಕುದ್ರುವಿನಲ್ಲಿ ನೀಲಾವರ ಮೇಳದ ಭಾಗವತ ತಿಮ್ಮಪ್ಪ ದೇವಾಡಿಗರಿಗೆ ಸುಮಾರು ಎಂಟು ಲಕ್ಷ ರೂಪಾಯಿ ವೆಚ್ಚದಲ್ಲಿ ಯಕ್ಷಗಾನ ಕಲಾರಂಗ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ತನ್ನ ತೀರ್ಥರೂಪರ ಸ್ಮರಣಾರ್ಥ ನಿರ್ಮಿಸಿಕೊಟ್ಟ ಮನೆ ‘ಶ್ರೀ ಮುರಳಿ’ ಯನ್ನು ಉಡುಪಿ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಸಂಸ್ಥೆಯ ಅಧ್ಯಕ್ಷರಾದ ಯೋಗೀಶ್ಚಂದ್ರಾಧರ ಉದ್ಘಾಟಿಸಿ ಯಕ್ಷಗಾನ ಕಲಾರಂಗದ ನಿಸ್ಪೃಹ ಸಾಮಾಜಿಕ ಸೇವೆ, ಪಾರದರ್ಶಕ ವ್ಯವಹಾರ ಎಲ್ಲರನ್ನೂ ಸಂಸ್ಥೆಯತ್ತ ಆಕರ್ಷಿಸಿದೆ. ಈ ಸಂಸ್ಥೆಗೆ ನೀಡಿದ ಪ್ರತಿಯೊಂದು ರೂಪಾಯಿಯೂ ಸದ್ವಿನಿಯೋಗವಾಗುತ್ತದೆ. ಇಂತಹ ಇನ್ನೊಂದು ಸಂಸ್ಥೆಯನ್ನು ನಾನು ನೋಡಿಲ್ಲ ಎಂದರು.
ಕುಂದಾಪುರ ಶಾಸಕ ಕಿರಣಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಬ್ಯಾಂಕ್ ಅಧಿಕಾರಿ ಟಿ. ಶ್ರೀಧರ ರಾವ್,ನ್ಯಾಯವಾದಿ ಎಂ. ಗೋಪಿಕೃಷ್ಣ ರಾವ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಸರಸ್ವತೀ ಜಿ.ರಾವ್, ಕುಮಾರಿ ಪಾವನಿ ಉಪಸ್ಥಿತರಿದ್ದರು.ಕೆ. ಬಾಲಕೃಷ್ಣ ಶುಭಾಶಂಸನೆಗೈದರು. ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ ಗಂಗಾಧರ ರಾವ್ ಅವರ ಸಮಾಜ ಪ್ರೀತಿಯನ್ನೂ, ಕಲಾರಂಗ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳನ್ನು,ಮುಖ್ಯವಾಗಿ ವಿದ್ಯಾಪೋಷಕ್ ಮೂಲಕ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತಿರುವ ಬಗೆಯನ್ನು ಕೊಂಡಾಡಿ ಅಭಿನಂದಿಸಿದರು.
ಹಟ್ಟಿಯಂಗಡಿ ದೇವಳದ ಧರ್ಮದರ್ಶಿ ಬಾಲಚಂದ್ರ ಭಟ್ ಇದ್ದವರು ಇಲ್ಲದವರಿಗೆ ನೀಡುವುದೆ ಸ್ವಸ್ಥ ಸಮಾಜದ ಲಕ್ಷಣ ಎಂದರು. ಉಡುಪಿ ಗಾಂಧಿ ಆಸ್ಪತ್ರೆಯ ವರಿಷ್ಠ ಡಾ.ಹರಿಶ್ಚಂದ್ರ, ಹಿರಿಯ ಇಂಜನೀಯರ್ ಎಂ.ನಾಗೇಶ ಹೆಗ್ಡೆ, ನಾರಾಯಣ ಮೂರ್ತಿ,ಪ್ರೊ ಎಂ. ಎಲ್. ಸಾಮಗ, ಕೃಷ್ಣರಾಜ ತಂತ್ರಿ,ಯು.ವಿಶ್ವನಾಥ ಶೆಣೈ, ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಗಿರೀಶ್ಚಂದ್ರ ಧರ,ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಪ್ರೊ.ಕೆ.ಸದಾಶಿವ ರಾವ್,ಯು.ಎಸ್. ರಾಜಗೋಪಾಲ ಆಚಾರ್ಯ,ಪ್ರೊ ಎಂ. ಆರ್. ಹೆಗಡೆ, ಭುವನ ಪ್ರಸಾದ ಹೆಗ್ಡೆ, ವಿಜಯಕುಮಾರ್ ಮುದ್ರಾಡಿ, ಸೀತಾರಾಮ ಭಟ್,ಅನಂತರಾಜ ಉಪಾಧ್ಯಾಯ, ಜಯರಾಮ ಪಡಿಯಾರ್, ಪ್ರತಿಭಾ ಸಾಮಗ ಹಾಗೂ ದೊಡ್ಡ ಸಂಖ್ಯೆಯಲ್ಲಿ ಸಂಸ್ಥೆಯ ಕಾರ್ಯಕರ್ತರು, ಎ.ಜೆ.ಅಸೋಶ್ಯೇಟ್ಸ್ ನ ಎಂ.ಗೋಪಾಲ ಭಟ್, ಇಂಜಿನಿಯರ್ಸ್ ಅಸೋಸಿಯೇಷನ್ ನಿಕಟ ಪೂರ್ವ ಅಧ್ಯಕ್ಷ ಪಾಂಡುರಂಗ ಆಚಾರ್, ಕಾರ್ಯದರ್ಶಿ ಮಹೇಶ್ ಕಾಮತ್ ಸಹಿತ ಅಸೋಶಿಯೆಶನ್ ಪದಾಧಿಕಾರಿಗಳು, ಸದಸ್ಯರು,ಎಂ.ಗಂಗಾಧರ ರಾಯರ ಬಂಧುಗಳು ಭಾಗವಹಿಸಿದ್ದರು.
ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಗಂಗಾಧರ ರಾವ್ ತನ್ನ ಬಾಲ್ಯದ ಕಷ್ಟದ ದಿನಗಳನ್ನು ಸ್ಮರಿಸಿಕೊಂಡು, ಕಲಾರಂಗದ ಸದಸ್ಯರೊಂದಿಗೆ ಕೆಲಸ ಮಾಡುತ್ತಾ ಅತ್ಯಂತ ಸಂತೋಷ ಪಟ್ಟಿದ್ದೇನೆ. ಸಂಸ್ಥೆಯ ಮೂಲಕ ದಾನ ಮಾಡಿದಾಗ ದೇವರು ಇನ್ನೊಂದು ರೂಪದಲ್ಲಿ ಕೊಡುತ್ತಾನೆ, ಇದು ನನ್ನ ಅನುಭವ. ತನ್ನ ಉತ್ಕರ್ಷಕ್ಕೆ ನೆರವಾದ ಹಿರಿಯರನ್ನು ನೆನಪಿಸಿಕೊಂಡರಲ್ಲದೆ ನಾನು ಸತ್ಕಾರ್ಯಕ್ಕೆ ಕೊಡುವದನ್ನು ಪ್ರೋತ್ಸಾಹಿಸುವ ನನ್ನ ಪತ್ನಿ ಇದಕ್ಕೆಲ್ಲ ಪ್ರೇರಕ ಶಕ್ತಿ ಎಂದು ನುಡಿದರು.
ಇದು ಅವರ ಪ್ರಾಯೋಜಕತ್ವದ ಐದನೆಯ ಮನೆಯಾಗಿದೆ. ಅತ್ಯಂತ ಜೀರ್ಣವಾಗಿದ್ದ ಮನೆಯಲ್ಲಿ ಮುಂದೆ ಹೇಗಪ್ಪಾ ಎಂದು ಚಿಂತಿಸುತ್ತಿದ್ದ ಕಾಲದಲ್ಲಿ, ಯಕ್ಷಗಾನ ಕಲಾರಂಗ ಈ ಸುಂದರ ಮನೆಯನ್ನು ನಿರ್ಮಿಸಿದೆ. ನಮ್ಮ ಇಡೀ ಕುಟುಂಬ ಗಂಗಾಧರ್ ಮತ್ತು ಸಂಸ್ಥೆಗೆ ಸದಾ ಋಣಿಯಾಗಿದೆ ಎಂದು ಭಾವುಕರಾಗಿ ತಿಮ್ಮಪ್ಪ ದೇವಾಡಿಗರು ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮ ನಿರೂಪಿಸಿದ ಕಾರ್ಯದರ್ಶಿ ಮುರಲಿ ಕಡೆಕಾರ್, ಮನೆ ನಿರ್ಮಾಣದ ಮಹಾಭಿಯಾನದಲ್ಲಿ ಗಂಗಾಧರ ರ ಕೊಡುಗೆ ಅಸಾಧಾರಣ. ಈ ತಿಂಗಳ ಅಂತ್ಯದೊಳಗೆ ಇನ್ನೂ ನಾಲ್ಕು ಮನೆಗಳು ಪೂರ್ಣಗೊಂಡು ಉದ್ಘಾಟನೆಗೊಳ್ಳಲಿವೆ ಎಂದರು.
ನಾರಾಯಣ ಎಂ.ಹೆಗಡೆ ವಂದಿಸಿದರು. ಆರಂಭದಲ್ಲಿ ತಿಮ್ಮಪ್ಪ ದೇವಾಡಿಗರು ತನ್ನ ಈರ್ವರು ಪುತ್ರರ ಹಿಮ್ಮೇಳದೊಂದಿಗೆ ಗಣಪತಿ ಸ್ತುತಿಯನ್ನು ಹಾಡಿದರು.