ಕುಂದಾಪುರ (ಅ.15):ಶಿಕ್ಷಣ ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಶಿಕ್ಷಣ ನಮ್ಮ ಬದುಕನ್ನು ಬದಲಾಯಿಸುವುದರ ಜೊತೆಗೆ ಇಡೀ ಜಗತ್ತನ್ನೇ ಬದಲಿಸುವ ಶಕ್ತಿಯನ್ನು ಹೊಂದಿದೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ICC) ಇದರ ಮಾನವ ಸಂಪನ್ಮೂಲ ವಿಭಾಗದ ನಿವೃತ್ತ ಅಧಿಕಾರಿ ಕುಂದಾಪುರ ಮೂಲದ ಶ್ರೀಮತಿ ಸುಪ್ರೀಯಾ ಕಾಮತ್ ಬ್ಯಾನರ್ಜಿ ಹೇಳಿದರು.
ಅವರು ಕುಂದಾಪುರದ ಡಾ.ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ವಲಯದ ವತಿಯಿಂದ ಹಮ್ಮಿಕೊಂಡ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳ ಬೇಕು. ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಸಂವಹನ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಕುಂದಾಪುರ ಎಜುಕೇಶನ್ ಸೊಸೈಟಿ (ರಿ,), ಇದರ ಕಾರ್ಯದರ್ಶಿಯಾದ ಶ್ರೀ ಸೀತರಾಮ ನಕ್ಕತ್ತಾಯ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಮಾನಂದ ಕಾರಂತರು ಪ್ರಾಸ್ತಾವಿಕ ಮಾತುಗಳನ್ನಾಡಿ ಶ್ರೀಮತಿ ಸುಪ್ರೀಯಾ ಕಾಮತ್ ಬ್ಯಾನರ್ಜಿಯವರನ್ನು ಪರಿಚಯಿಸಿದರು.
ಸುಪ್ರೀಯಾ ಕಾಮತ್ ಬ್ಯಾನರ್ಜಿಯವರು ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಾಯಧನದ ಚೆಕ್ ನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು. ಹಾಗೆಯೇ ಡಾ.ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ವಲಯದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ಉಮೇಶ್ ಶೆಟ್ಟಿ ,ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ವಲಯದ ಅಧ್ಯಕ್ಷರಾದ ಸತ್ಯನಾರಾಯಣ ಪುರಾಣಿಕ್ , ಕಾರ್ಯದರ್ಶಿ ಸಚಿನ್ ನಕ್ಕತ್ತಾಯ ಉಪಸ್ಥಿತರಿದ್ದರು.ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ ಕಾರ್ಯಕ್ರಮ ನಿರೂಪಿಸಿದರು.