ಕಾರ್ಕಳ( ಜ,02): ಯುವಕರು ಮಾದಕ ವ್ಯಸನಗಳಿಗೆ ದಾಸರಾಗಬಾರದು,ಸಮಾಜದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಬೇಕು ಮತ್ತು ವ್ಯಸನ ಮುಕ್ತ ಜನಾಂಗ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಜಾಗ್ರತರಾಗಿರಬೇಕು. ಗಾಂಜಾ, ಅಫೀಮಿನಂತಹ ಮಾದಕ ದ್ರವ್ಯಗಳು ಭವಿಷ್ಯವನ್ನೇ ನಾಶಪಡಿಸುತ್ತದೆ .ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳೇ ಈ ದಂಧೆಯಲ್ಲಿರುವವರ ಗುರಿಯಾಗಿದ್ದಾರೆ. ಸುಲಭವಾಗಿ ಹಣ ಗಳಿಸುವ ಕಾರ್ಯಕ್ಕೆ ಮನಸ್ಸು ಮಾಡಿ ಸಿಕ್ಕಿ ಬಿದ್ದರೆ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ. ಯುವಕರು ಮಾದಕ ವ್ಯಸನದಂತಹ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಕಾರ್ಕಳ ಎಂದು ಕಾರ್ಕಳ ನಗರ ಠಾಣಾಧಿಕಾರಿ ಶ್ರೀ ಪ್ರಸನ್ನ ಎಂ. ಎಸ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಅವರು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕಲಿಕಾ ಪರವಾನಗಿ, ಇನ್ಷೂ ರೆನ್ಸ್ ಮತ್ತು ಹೆಲ್ಮೆಟ್ ಇಲ್ಲದೆ ರಸ್ತೆಗೆ ವಾಹನಗಳನ್ನು ಇಳಿಸುವಂತಿಲ್ಲ. ಆಕಸ್ಮಿಕ ಅಪಘಾತಗಳು ನಡೆದರೆ ಜೀವನಷ್ಟದ ಜೊತೆಗೆ ಪರಿಹಾರವೂ ದೊರಕುವುದಿಲ್ಲ ಎಂದು ಕಿವಿ ಮಾತು ಹೇಳಿದರು.
ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಮಾತನಾಡಿ ಆರಕ್ಷಕರಿಂದ ನಮ್ಮ ಸುತ್ತ ಮುತ್ತಲಿನ ಪರಿಸರ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ನಾವು ಆರಕ್ಷಕರಿಗೆ ಆಭಾರಿಗಳಾಗಿರಬೇಕಾಗಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಆರಕ್ಷಕ ಸಿಬ್ಬಂದಿ ಘನಶ್ಯಾಮ್, ಉಪನ್ಯಾಸಕರಾದ ರಾಘವೇಂದ್ರ ರಾವ್, ಅಕ್ಷತಾ ಜೈನ್ ಉಪಸ್ಥಿತರಿದ್ದರು. ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.