(ಕುಂದಾಪುರ: ಏ:29 ) ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಮೂಡ್ಲಕಟ್ಟೆ ಕಾಲೇಜಿನಲ್ಲಿ “ಸ್ವಾತಂತ್ರ್ಯ” ಎಂಬ ಒಂದು ದಿನದ “ಯುವಜನ ವಿಕಾಸ” ಕಾರ್ಯಗಾರವನ್ನು ಸಂಪನ್ಮೂಲ ವ್ಯಕ್ತಿಯಾದ ಡಾ. ಶಿಕಾರಿಪುರ ಕೃಷ್ಣಮೂರ್ತಿ, ಪ್ರಾಧ್ಯಾಪಕರು ಮತ್ತು ಪರಿಣಿತ ಎಚ್ ಆರ್ ಡಿ.ಯ ಶಿಕ್ಷಕರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
“ಯಾ ವಿದ್ಯಾ ಸ ವಿಮುಕ್ತಯೇ” ಎಂದು ವಿದ್ಯಾರ್ಥಿಗಳಿಂದ ಹೇಳಿಸಿದ ಅವರು ಎಲ್ಲ ಬಂಧಗಳಿಂದಲೂ ಬಿಡುಗಡೆಗೊಳಿಸುವ ಮುಕ್ತಿದಾಯಿನಿಯಾಗಿದೆ ವಿದ್ಯೆ ಎಂದರು. ಶರೀರ, ಬುದ್ಧಿ, ಮನಸ್ಸುಗಳನ್ನು ಮುಕ್ತಗೊಳಿಸಿ ಮತ್ತೆ ಬಲಗೊಳಿಸಬೇಕು. ಇಂತಹ ಸಮರ್ಥ ಸಜ್ಜನರ ಸಂತುಷ್ಟ ಜೀವನವೇ ಸಮಾಜದ ಸೌಖ್ಯಗಳ ಮೂಲವಾಗಿದೆ. ಅಂತಹ ವ್ಯಕ್ತಿಗಳ ಸಮರಸ ಸಮುದಾಯವೇ ಸುಖಿ ಸ್ವತಂತ್ರ ಸಮಾಜ, ಈ ಸ್ವಾತಂತ್ರ್ಯ ನಮ್ಮ ಭಾರತದ ಅಮೂಲ್ಯ ಸಂಪತ್ತು ಅದಕ್ಕಾಗಿ ನಮ್ಮ ಯುವಜನರನ್ನು ಪ್ರಜ್ಞಾವಂತರಾಗಿಸುವ ಮಾನವೀಯರಾಗಿಸುವ ಸದುದ್ದೇಶ ನಮ್ಮದು ಎಂದು ತಿಳಿಸಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾದ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ನ ಶ್ರೀಯುತ ನಂದಗೋಪಾಲ, ಹಿರಿಯ ಪತ್ರಕರ್ತರು ಟೈಮ್ಸ್ ಆಫ್ ಇಂಡಿಯಾ, ಕಾರ್ಯಗಾರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಪ್ರಾಂಶುಪಾಲೆಯವರಾದ ಡಾ| ಪ್ರತಿಭಾ ಎಂ ಪಟೇಲ್ ರವರು ಅಧ್ಯಕ್ಷೀಯ ಮಾತುಗಳಲ್ಲಿ, “ವಿದ್ಯಾರ್ಥಿಗಳು, ಗಣ್ಯರು ತಿಳಿಸಿದ ವಿಚಾರತತ್ವವನ್ನು ಅರಿತು ನಿಮ್ಮ ಬದುಕನ್ನು ರೂಪಿಸಿಕೊಳ್ಳಲು ಅವಕಾಶಗಳು ಸಾವಿರಾರು ಇವೆ ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಶ್ರೀ ಜಯಶೀಲ ಕುಮಾರ್, ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಿ.ಸಿ.ಎ. ವಿದ್ಯಾರ್ಥಿಗಳಾದ ಕು| ನೇತ್ರಾವತಿ ಸ್ವಾಗತಿಸಿದರು. ಪ್ರೋ| ಸುಮನ ಅತಿಥಿ ಪರಿಚಯ ನೀಡಿದರುಪ್ರತಿಭಾ ವಂದಿಸಿದರು.ರಿಯಾನ್ ಕಾರ್ಯಕ್ರಮ ನಿರ್ವಹಿಸಿದರು.