ಕೋಡಿ (ನ.14): ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನೆರವೇರಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕರ್ನಾಟಕ ಸರಕಾರದ ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತರಾಷ್ಟ್ರೀಯ ಗೋಲ್ಡ್ ಮೆಡಲಿಸ್ಟ್ ವೇಟ್ ಲಿಫ್ಟರ್ ಶ್ರೀ. ಗುರುರಾಜ್ ಪೂಜಾರಿ ಚಿತ್ತೂರು ಇವರು ಕ್ರೀಡಾಕೂಟವನ್ನುದ್ದೇಶಿಸಿ “ಮಗುವಿಗೆ ಕೇವಲ ನಾಲ್ಕು ಗೋಡೆಗಳ ನಡುವಿನ ಶಿಕ್ಷಣ ದೊರೆತರೆ ಸಾಲದು, ವ್ಯಕ್ತಿಯು ಬೌದ್ಧಿಕ, ಮಾನಸಿಕ ದೈಹಿಕವಾಗಿ, ಸದೃಢವಾಗಲು ಕ್ರೀಡೆ ಅತೀ ಅವಶ್ಯ. ಆ ನೆಲೆಯಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ನೀಡುತ್ತಿರುವ ಸೇವೆ ಶ್ಲಾಘನೀಯ” ಎಂದು ನುಡಿದರು.
ಕ್ರೀಡಾಕೂಟದ ಮತ್ತೊರ್ವ ಮುಖ್ಯ ಅತಿಥಿಗಳಾದ ಉಡುಪಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ.ಚಂದ್ರಶೇಖರ ಶೆಟ್ಟಿ, ಕ್ರೀಡಾ ಧ್ವಜಾರೋಹಣ ನೆರವೇರಿಸಿ ಕ್ರೀಡಾಕೂಟವನ್ನು ಉದ್ದೇಶಿಸಿ “ಈ ಕ್ರೀಡಾಕೂಟ ಇತರ ಶಿಕ್ಷಣ ಸಂಸ್ಥೆಗಳ ಕ್ರೀಡಾಕೂಟಗಳಂತೆ ಸಹಜವಾಗಿರದೆ, ನಾವಿನ್ಯತೆಯೊಂದಿಗೆ ಸಂಸ್ಕೃತಿ ಮತ್ತು ಶಿಸ್ತನ್ನು ಪ್ರತಿಬಿಂಬಿಸುತ್ತಿದೆ. ಒಂದು ಮಗು ಇಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ದಾಖಲಾದರೆ ಆ ಮಗು ಮುಂದೆ ಶಿಕ್ಷಕನಾಗಿಯೋ ಇಂಜಿನಿಯರ್ ಆಗಿಯೋ ಸಮಾಜಕ್ಕೆ ಹೋಗುವಷ್ಟು ಶಿಕ್ಷಣ ನೀಡುವ ಸಮೂಹ ಶಿಕ್ಷಣ ಸಂಸ್ಥೆ ಎನ್ನುವುದಕ್ಕೆ ಹೆಮ್ಮೆ ಎನಿಸುತ್ತಿದೆ” ಎಂದರು.
ಬ್ಯಾರೀಸ್ ವಿಶ್ವಸ್ತ ಮಂಡಳಿ ಸದಸ್ಯ ಡಾ. ಆಸೀಫ್ ಬ್ಯಾರಿ “ನಾವು ಯಶಸ್ವಿಯಾಗಲು ನಮಗೆ ಸೋಲಿನ ಭಯಕ್ಕಿಂತ, ಗೆಲುವಿನ ಛಲ ಹೆಚ್ಚಾಗಿರಬೇಕು. ಆ ನೆಲೆಯಲ್ಲಿ ಶೈಕ್ಷಣಿಕವಾಗಿ ಹಾಗೂ ಕ್ರೀಡಾ ಸಾಧನೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಸದಾ ಮುಂದಿದ್ದಾರೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ” ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಶ್ರೀ ಗುರುರಾಜ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಮೊಹಮ್ಮದ್ ಹಫೀಲ್ ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದರು. ನಂತರದಲ್ಲಿ ಸಮೂಹ ಶಿಕ್ಷಣ ಸಂಸ್ಥೆಗಳ ಕ್ರೀಡಾ ಸಾಧಕ ವಿದ್ಯಾರ್ಥಿಗಳಾದ ಅಬ್ದುಲ್ ಹಕಂ, ಮೊಹಮ್ಮದ್ ಹಫೀಲ್, ಅಬ್ದುಲ್ ಮುಹಾಝ್, ಮೊಹಮ್ಮದ್ ಶಮ್ರಾಜ್, ಅನುಷ್ಕಾ, ಸ್ವಾತಿ ಅವರನ್ನು ಗುರುತಿಸಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ. ಕೆ.ಎಂ ಅಬ್ದುಲ್ ರೆಹಮಾನ್ ವಹಿಸಿಕೊಂಡು ಕ್ರಿಡಾಕೂಟಕ್ಕೆ ಶುಭ ಹಾರೈಸಿದರು.
ವೇದಿಕೆ ಮುಂಭಾಗದ ಅಂಕಣದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ತಾಳಬದ್ದ ಚಟುವಟಿಕೆಗಳ ಪ್ರಾತ್ಯಕ್ಷಿತೆ ವಿಶೇಷ ಮೆರುಗು ನೀಡಿತು. ಕ್ರೀಡಾಕೂಟದ ವೇದಿಕೆಯಲ್ಲಿ ಕುಂದಾಪುರ ಪುರಸಭಾ ಸದಸ್ಯರುಗಳಾದ ಶ್ರೀಮತಿ ಕಮಲಾ, ಶ್ರೀ. ಅಷ್ಫಾಕ್, ಶಾಲಾಭಿವೃದ್ಧಿ ಸಮಿತಿ ಹಾಗೂ ಸಲಹಾ ಮಂಡಳಿಯ ಸದಸ್ಯರುಗಳು, ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರು, ಊರಿನ ಗಣ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.
ಅನುದಾನಿತ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕರಾದ ಮೊಹಮ್ಮದ್ ಇಲಿಯಾಸ್ ಸ್ವಾಗತಿಸಿ, ಬ್ಯಾರೀಸ್ ಆಂಗ್ಲ ಮಾಧ್ಯಮ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ವೀಣಾ ಅಗೇರ್ ವಂದಿಸಿದರು .ಕನ್ನಡ ಉಪನ್ಯಾಸಕ ಡಾ.ಸಂದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.