ಗಂಗೊಳ್ಳಿ (ಫೆ.18): “ ಬಾಲ್ಯದಿಂದಲೂ ನಮ್ಮನ್ನೆಲ್ಲ ಆಕರ್ಷಿಸಿದ ಕಲೆ ಯಕ್ಷಗಾನ. ಅಲ್ಲಿಯ ವೈವಿಧ್ಯಮಯವಾದ ವೇಷಭೂಷಣ ಮನಸ್ಸಿಗೆ ಬೆರಗು ಮತ್ತು ಅಚ್ಚರಿ ಹುಟ್ಟಿಸಿದ ಅಂಶ. ಯಾವುದೇ ಆಧುನಿಕ ಸೌಲಭ್ಯವಿಲ್ಲದ ಆ ಕಾಲದಲ್ಲಿ ಗ್ಯಾಸ್ ಲೈಟ್ ಗಳ ನೆರಳು ಬೆಳಕಿನಲ್ಲಿ ಕಲಾವಿದರು ಧರಿಸುತ್ತಿದ್ದ ಉಡುಗೆತೊಡುಗೆಗಳು, ಮುಖವರ್ಣಿಕೆ, ಕಿರೀಟ ಮೊದಲಾದವು ಪೌರಾಣಿಕ ಲೋಕವನ್ನೇ ಸೃಷ್ಟಿಸುತ್ತಿದ್ದವು. ಇಂದು ಕಾಲ ಬದಲಾಗಿದೆ. ಆದರೂ ಅಂದಿನ ಅದೇ ಆಕರ್ಷಣೆ ಯಕ್ಷಗಾನಕ್ಕಿದೆ. ಐವತ್ತರ ಸಂಭ್ರಮವನ್ನು ಆಚರಿಸುತ್ತಿರುವ ಸಾಲಿಗ್ರಾಮ ಮಕ್ಕಳ ಮೇಳವು ಶಾಲೆ ಶಾಲೆಗಳಲ್ಲಿ ಆಯೋಜಿಸಿರುವ ವೇಷಭೂಷಣಗಳ ಪರಿಚಯಾತ್ಮಕವಾದ ಕಮ್ಮಟವು ಅರ್ಥಪೂರ್ಣವೂ ಅಭಿನಂದನೀಯವೂ ಆಗಿದೆ” ಎಂದು ಗಂಗೊಳ್ಳಿಯ ಉದ್ಯಮಿ, ಜಿ.ಎಸ್.ವಿ.ಎಸ್. ಅಸೋಸೊಯೇಷನ್ನ ಸಂಚಾಲಕರಾದ ಗಣೇಶ್ ಕಾಮತ್ ಹೇಳಿದರು.
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ತನ್ನ ಐವತ್ತರ ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮವಾಗಿ ಆಯೋಜಿಸಿದ ಬಡಗುತಿಟ್ಟಿನ ವೇಷಭೂಷಣಗಳ ಪರಿಚಯ ಕಾರ್ಯಕ್ರಮ ‘ಯಕ್ಷಲೋಕದೊಳಗೊಂದು ಪಯಣ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನ ಸಂಘಟಕ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸುದರ್ಶನ ಉರಾಳ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಸರಸ್ವತಿ ವಿದ್ಯಾಲಯ ಗಂಗೊಳ್ಳಿ ಇಲ್ಲಿನ ಕಾರ್ಯದರ್ಶಿ ಎನ್. ಸದಾಶಿವ ನಾಯಕ್, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ, ಪ್ರಾಂಶುಪಾಲರಾದ ಕವಿತ ಎಂ ಸಿ. ಉಪಸ್ಥಿತರಿದ್ದರು.
ಮಕ್ಕಳ ಮೇಳದ ಕಾರ್ಯದರ್ಶಿ ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಸ್ಥಾವನೆಯೊಂದಿಗೆ ಸ್ವಾಗತಿಸಿದರು. ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಕಾರ್ಯದರ್ಶಿ ವೆಂಕಟೇಶ ವೈದ್ಯ ವಂದಿಸಿದರು. ಹಿಂದಿ ಉಪನ್ಯಾಸಕ ನಾರಾಯಣ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.
ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಶಾಲೆಯ ಹಲವು ವಿದ್ಯಾರ್ಥಿಗಳು ಬಣ್ಣಗಳ ಮಿಶ್ರಣ, ಮುದ್ರೆ ರೇಖೆಗಳ ಲೇಪನ, ಗೆಜ್ಜೆ, ಕಸೆ ಕಟ್ಟುವುದು, ಅಂಗಾಭರಣ, ಕೇದಗೆಮುಂದಲೆ, ಕಿರೀಟ ಧಾರಣೆಯ ವಿವಿಧ ಹಂತಗಳಲ್ಲಿ ಭಾಗಿಯಾದರು. ಕಾಲೇಜಿನ ಬೊಧಕ ಮತ್ತು ಬೋಧಕೇತರರು ಸುಮಾರು ಹದಿನೈದು ಮಂದಿ ವಿವಿಧ ವೇಷ ಭೂಷಣಗಳನ್ನು ಧರಿಸಿ ಹೊಸ ಅನುಭವವನ್ನು ತಮ್ಮದಾಗಿಸಿಕೊಂಡರು.