ಕುಂದಾಪುರ (ಮಾ 01): ಉತ್ತಮ ಆಡಳಿತಗಾರನಾದ ಶಿವಾಜಿ ಶಿಸ್ತಿನೊಂದಿಗೆ ಮಹಿಳೆಯರನ್ನು ಗೌರವಿಸುವ ವ್ಯಕ್ತಿತ್ವ ಹೀಗಾಗಿ ಶಿವಾಜಿಯ ಬಗೆಗಿನ ಇತಿಹಾಸದ ಅಧ್ಯಯನ ಕೇವಲ ವ್ಯಕ್ತಿಯ ಅಧ್ಯಯನವಾಗದೇ ಆ ಕಾಲಘಟ್ಟದ ಸಂಸ್ಕೃತಿ, ಕಲೆ, ವಾಸ್ತುಶಿಲ್ಪ ಜೀವನಕ್ರಮದ ಅಧ್ಯಯನ ಹೀಗಾಗಿ ಇತಿಹಾಸದ ಓದು ವಿದ್ಯಾರ್ಥಿಗಳ ದೃಷ್ಟಿಕೋನವನ್ನು ಬದಲಾಯಿಸುತ್ತದೆ ಎಂದು ಇತಿಹಾಸ ತಜ್ಞ, ವಾಗ್ಮಿ, ಪ್ರಾಧ್ಯಾಪಕ ಶ್ರೀ ರವಿರಾಜ್ ಪರಾಡ್ಕರ್ ಹೇಳಿದರು.
ಅವರು ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ಇತಿಹಾಸ ಸಂಕಲನ ಸಮಿತಿ, ಕರ್ನಾಟಕ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಅಧ್ಯಯನ ಕೇಂದ್ರ, ಬಸ್ರೂರು ಇವರ ಸಯೋಗದೊಂದಿಗೆ ಕಾಲೇಜಿನ ಇಂಗ್ಲೀಷ್ ಮತ್ತು ಹಿಂದಿ ವಿಭಾಗದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ‘ಶಿವಾಜಿ ಮಹಾರಾಜನ ಕರ್ನಾಟಕದೊಂದಿಗಿನ ಬಾಂಧವ್ಯದ’ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸಾಮಾಜಿಕ ಚಿಂತಕ ಶ್ರೀ ದೇವು ಹನೆಹಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾರತೀಯ ಇತಿಹಾಸ ಸಂಕಲನದ ಸಮಿತಿ ಕಿತ್ತೂರಿನ ಮುಖ್ಯಸ್ಥ ಡಾ. ಬಸವರಾಜ ಎನ್. ಮುಖ್ಯ ಅತಿಥಿ ನೆಲೆಯ ಮಾತುಗಳನ್ನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ- ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಶುಭನುಡಿಗಳನ್ನಾಡಿದರು. ಕಾರ್ಯಕ್ರಮದ ಸಂಯೋಜಕ ಪ್ರದೀಪ್ ಬಸ್ರೂರು ಉಪಸ್ಥಿತರಿದ್ದರು.
ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಪಿಕಾ ಜಿ. ಸ್ವಾಗತಿಸಿ, ಇಂಗ್ಲಿಷ್ ಪ್ರಾಧ್ಯಾಪಕರಾದ ರವೀನಾ ಸಿ. ಪೂಜಾರಿ, ಸ್ವಾತಿ ರಾವ್ ಅತಿಥಿಗಳನ್ನು ಪರಿಚಯಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದೀಪಾ ವಂದಿಸಿ, ಇಂಗ್ಲಿಷ್ ಪ್ರಾಧ್ಯಾಪಕರಾದ ಸ್ಟಾಲಿನ್ ಡಿಸೋಜ ನಿರೂಪಿಸಿದರು.