ಕುಂದಾಪುರ (ಮೇ 17): ಇಲ್ಲಿನ ಡಾ. ಬಿ .ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಎರಡನೇ ಅವಧಿಗೆ ರಕ್ಷಕ- ಶಿಕ್ಷಕ ಸಭೆಯನ್ನು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿಯವರು ಮಾತನಾಡಿ, ವರ್ತಮಾನದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಮೇಲೆ ಬಹಳ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತಿದೆ. ರಕ್ಷಕರು, ಪೋಷಕರು ಈ ಕುರಿತು ಗಮನಕೊಡಬೇಕು . ವಿದ್ಯಾರ್ಥಿಗಳ ಬದುಕನ್ನು ರೂಪಿಸುವಲ್ಲಿ ಹೆತ್ತವರ ಪಾತ್ರ ಮಹತ್ವದ್ದು ಎಂದರು. ಇದೇ ಸಂದರ್ಭ ವಿವಿಧ ದೃಷ್ಟಾಂತಗಳ ಮೂಲಕ, ವರ್ತಮಾನದ ಅವಸರದ ಬದುಕಿನಿಂದ ಆಗುತ್ತಿರುವ ಆವಾಂತರಗಳ ಕುರಿತು ವಿವರಿಸಿದರು.
ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷರಾದ ಉದ್ಯಮಿ ಎಸ್. ಜಯಕರ ಹೆಗ್ಡೆ ಹಾಗೂ ಜೊತೆ ಕಾರ್ಯದರ್ಶಿ ಶಿಕ್ಷಕಿ ಶೋಭಾ ಪೂಜಾರಿ ಶುಭ ಹಾರೈಸಿದರು. ರಕ್ಷಕ -ಶಿಕ್ಷಕ ಸಂಘದ ಕಾರ್ಯದರ್ಶಿ, ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಸ್ತಾವಿಸಿದರು. ಆಡಳಿತ ನಿಕಾಯಕ ರಕ್ಷಿತ್ ರಾವ್ ಗುಜ್ಜಾಡಿ ಹಾಗೂ ಶೈಕ್ಷಣಿಕ ನಿಕಾಯಕ ಗಿರಿರಾಜ್ ಭಟ್ ನೆಂಪು ಕಾಲೇಜಿನ ವಿವಿಧ ಕ್ರಿಯಾ ಚಟುವಟಿಕೆ ಹಾಗೂ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು. ಉಪನ್ಯಾಸಕ ಕಿಶೋರ್ ಕೃಷ್ಣ ಸ್ವಾಗತಿಸಿ, ವಿದ್ಯಾರ್ಥಿ ಅಭಿಷೇಕ್ ಕುಲಾಲ್ ಪ್ರಾರ್ಥಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ದೀಪಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.