ಕುಂದಾಪುರ (ಮೇ 26): ಸಮಾಜದ ಕಟ್ಟ ಕಡೆಯ ಮಗುವೂ ವಿಧ್ಯಾಭ್ಯಾಸ ಪಡೆಯಬೇಕಂಬ ಮಹತ್ವಾಕಾಂಕ್ಷೆಯಿಂದ ಹುಟ್ಟಿಕೊಂಡ ವಿಧ್ಯಾಸಂಸ್ಥೆಯಾದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26 ನೇ ಸಾಲಿನ ಪ್ರಥಮ ವರ್ಷದ ಸಿಎ ಸಿಎಸ್ ಸಿಎಂಎ ವಿಧ್ಯಾರ್ಥಿಗಳಿಗೆ ಪೂರ್ವ ಪರಿಚಯ ಕಾರ್ಯಕ್ರಮ ಹಾಗೂ ಮುಂದಿನ ದಿನಗಳಲ್ಲಿ ನಡೆಯುವ ತರಬೇತಿಯ ಉದ್ಘಾಟನಾ ಸಮಾರಂಭ ನೆರವೇರಿತು.
ಉಪಪ್ರಾಂಶುಪಾಲರಾದ ಡಾ.ಚೇತನ್ ಶೆಟ್ಟಿ ಕೋವಾಡಿ ಅವರು ಸಂಸ್ಥೆಯಲ್ಲಿ ಸಿಎಸ್ ಸಿಎಂಎ ವಿಧ್ಯಾರ್ಥಿಗಳಿಗೆ ಇರಬೇಕಾದ ಶಿಸ್ತು ಮತ್ತು ಅದರ ನಿಭಾಯಿಸಲು ಬೇಕಾದ ಸಂಯಮಗಳ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉದ್ಘಾಟಕರಾಗಿ ಆಗಮಿಸಿದ ಉಡುಪಿಯ ವಿ ರೀಚ್ ಸಂಸ್ಥೆಯ ಸ್ಥಾಪಕರು ಹಾಗು ತರಬೇತುದಾರರಾದ ಸಿಎಸ್ ಸಂತೋಷ್ ಪ್ರಭು ಅವರು ವಿದ್ಯಾರ್ಥಿಗಳನ್ನು ಹಾಗೂ ಅವರು ತೆಗೆದುಕೊಳ್ಳುವ ಕೋರ್ಸ್ ಗಳನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭ ಈ ಹಿಂದೆ ನಡೆದ ಸಿಎ ಸಿಎಸ್ ಸಿಎಂಎ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ವಿಧ್ಯಾರ್ಥಿಗಳಿಗೆ ಗೌರವ ಪುರಸ್ಕಾರವನ್ನು ನೀಡಿ ಅವರ ಪರಿಶ್ರಮವನ್ನು ಪ್ರಶಂಸಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಪ್ರೊಫೆಸರ್ ಕೆ ಉಮೇಶ್ ಶೆಟ್ಟಿ ಯವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಪ್ರೊಫೆಷನಲ್ ಕೋರ್ಸ್ ಅಭ್ಯಾಸದ ಪೂರ್ವದಲ್ಲಿ ಇರಬೇಕಾದ ಛಲ ಹಾಗೂ ಅಭ್ಯಾಸ ಸಮಯದಲ್ಲಿ ಬೇಕಾದ ನಿಷ್ಠೆ, ಪಾಲಿಸಬೇಕಾದ ವೈಯಕ್ತಿಕ ವೇಳಾಪಟ್ಟಿ, ಬೆಳೆಸಿಕೊಳ್ಳಬೇಕಾದ ಹವ್ಯಾಸ, ಆಹಾರ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೀಣಾ ವಿ ಭಟ್ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕರಾದ ಸುಹಾಸ್ ಜಟ್ಟಿಮನೆ ವಂದಿಸಿ, ಅಂತಿಮ ವರ್ಷದ ವಿಧ್ಯಾರ್ಥಿನಿ ಸಿಂಚನ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಎಲ್ಲಾ ಪ್ರಾಧ್ಯಾಪಕರು ಉಪಸ್ಥಿತರಿದ್ದರು.