ಕುಂದಾಪುರ (ಅ.19) : ತರಗತಿ ಎಂದರೆ ವಿದ್ಯಾರ್ಥಿಗಳಿಗೆ ಮುಕ್ತ ವಾತಾವರಣ ಕಲ್ಪಿಸುವ ತಾಣವಾಗಿರಬೇಕೇ ಹೊರತು ಅವರ ಭಾವನೆಗಳನ್ನು ಕಟ್ಟಿ ಹಾಕುವ ಕೋಣೆಯಾಗಿರಬಾರದು. ಅಲ್ಲದೇ ವಿದ್ಯಾರ್ಥಿಗಳನ್ನು ಪ್ರೀತಿಸುವ, ಕಾಳಜಿಯುಕ್ತ ಜೀವಂತಿಕೆ ತುಂಬಿಸಬಲ್ಲ ಶಿಕ್ಷಕರು ಎಂದೆಂದಿಗೂ ಅವಿನಾಶಿ ಎಂದು ಸಿಕ್ಕಿಂ ಮಣಿಪಾಲ ವಿಶ್ವವಿದ್ಯಾನಿಲಯದ ಪ್ರೊ. ಚಾನ್ಸೆಲರ್ ಡಾ.ಕೆ ರಾಮ್ ನಾರಾಯಣ್ ಹೇಳಿದರು.
ಅವರು ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ ಶಿಕ್ಷಕರಿಗಾಗಿ ಆಯೋಜಿಸಿದ ಪುನಶ್ಚೇತನ ಕಾರ್ಯಾಗಾರದಲ್ಲಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮಾತನಾಡುತ್ತಾ ತರಗತಿಯಲ್ಲಿ ಸಮಸ್ಯೆಗಳು ಎಲ್ಲಿವೆ ಎಂದು ಯೋಚಿಸುವುದಕ್ಕಿಂತ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಇಂದಿನ ದಿನಗಳಲ್ಲಿ ಯೋಚಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷರಾಗಿರುವ ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಯ ಕಾರ್ಯದರ್ಶಿಯಾಗಿರುವ ಸೀತಾರಾಮ ನಕ್ಕತ್ತಾಯರು, ಶಿಕ್ಷಕರು ಕ್ರಿಯಾಶೀಲರಾಗಬೇಕಾದರೆ ತರಬೇತಿಯನ್ನು ಪಡೆದು ಅದನ್ನು ದೈನಂದಿನ ತರಗತಿಗಳಲ್ಲಿ ಅಳವಡಿಸಿಕೊಳ್ಳುವುದು ಅತೀ ಮುಖ್ಯ ಎಂದರು.
ಶಿಕ್ಷಣ ಸಂಯೋಜಕರಾದ ವಿಲ್ಮಾ ಡಿ ಸಿಲ್ವಾ ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕಿ ಶ್ವೇತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು, ಶಿಕ್ಷಕರು, ಸಂಸ್ಥೆಯ ಶಿಕ್ಷಕ ವಿದ್ಯಾರ್ಥಿಗಳು, ಕುಂದಾಪುರ ಪರಿಸರದ ವಿವಿಧ ಶಾಲೆಗಳ ಆಸಕ್ತ ಶಿಕ್ಷಕರು ಉಪಸ್ಥಿತರಿದ್ದರು.