ಕುಂದಾಪುರ (ಡಿ. 27): ವಿದ್ಯಾರ್ಥಿ ಜೀವನ ಎಂದರೆ ಕೇವಲ ಕಟ್ಟುನಿಟ್ಟಿನ ಜೀವನವಲ್ಲ. ಅಲ್ಲಿ ತಮಾಷೆ, ಸಂತೋಷ, ಗೆಳೆತನದ ಜೊತೆಗೆ ಕಲಿಕೆಯು ಮುಖ್ಯವಾಗಿರುತ್ತದೆ. ನಮಗೆ ಮತ್ತೊಮ್ಮೆ ಶಾಲಾ ಜೀವನ ಸಿಗುವುದಿಲ್ಲ. ನಾವು ಕಲಿತ ಶಾಲೆಗೆ ಮರಳಬೇಕಾದರೆ ಏನಾದರು ಒಂದು ಉತ್ತಮ ಸಾಧನೆ ಮಾಡಿದರೆ ಇಂತಹ ವೇದಿಕೆ ಸಿಗುತ್ತದೆ ಎಂದು ಸಂಸ್ಥೆಯ ಪ್ರಾಕ್ತನ ವಿದ್ಯಾರ್ಥಿಯಾದ, ಸರ್ವೇಯರ್ ಎ.ಡಿ.ಎಲ್.ಆರ್ ಆಫೀಸ್ ಕುಂದಾಪುರ ಶ್ರೀಯುತ ಶಶಾಂಕ್ ಬಿ. ಜೋಗಿ ಹೇಳಿದರು.
ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಚ್. ಎಮ್ ಮತ್ತು ವಿ. ಕೆ. ಅರ್ ಶಾಲೆಗಳ 49ರ ವಾರ್ಷಿಕ ಸಂಭ್ರಮದ ರುಗ್ಮಯಾನ ಸುವರ್ಣ ರಥದತ್ತ ಸಂಭ್ರಮದ ಪಥದ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಸಂಸ್ಥೆಯ ಸಂಚಾಲಕರು, ಅಧ್ಯಕ್ಷರು ಆಗಿರುವ ಶ್ರೀ ಬಿ.ಎಂ ಸುಕುಮಾರ್ ಶೆಟ್ಟಿ ಯವರು ಮಾತನಾಡುತ್ತಾ 49 ವರ್ಷಗಳ ಮೈಲುಗಲ್ಲುಗಳನ್ನು ದಾಟಿ ಸುವರ್ಣ ಸಂಭ್ರಮದ ಆಚರಣೆಯಲ್ಲಿರುವ ನಮ್ಮ ಸಂಸ್ಥೆ ಶೈಕ್ಷಣಿಕವಾಗಿ, ಸಾಂಸ್ಕ್ರತಿಕವಾಗಿ ಔದ್ಯೋಗಿಕವಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂಬುದಕ್ಕೆ ಇಂದಿನ ʼರುಗ್ಮಯಾನʼ ವೇದಿಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಕೆ. ಸೀತಾರಾಮ ನಕ್ಕತ್ತಾಯ ಹಾಗು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ಎಚ್. ಎಚ್. ಎಮ್ ಪ್ರಾಥಮಿಕ ವಿಭಾಗದ ಸಹಾಯಕ ಮುಖ್ಯ ಶಿಕ್ಷಕಿ ಶೀಮತಿ ಕವಿತಾ ಭಟ್ ವಾರ್ಷಿಕ ವರದಿ ವಾಚಿಸಿದರು. ಇದೇ ವೇದಿಕೆಯಲ್ಲಿ ಕರಾಟೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿದ ಅಥರ್ವ ಖಾರ್ವಿ ಮತ್ತು ಅರ್ನೋನ್ ಡಿ ಅಲ್ಮೇಡಾ ರನ್ನು ಸನ್ಮಾನಿಸಲಾಯಿತು. ವಿಧ್ಯಾರ್ಥಿಗಳಾದ ಬಿ.ವಿ ಜಯಸೂರ್ಯ ಮತ್ತು ಕುಮಾರಿ ಇಹಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.