ಕಾರ್ಕಳ ( ಜ .6): ಇಲ್ಲಿನ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ಕ್ರಿಯೇಟಿವ್ ನುಡಿಹಬ್ಬ ಮತ್ತು ವಾರ್ಷಿಕೋತ್ಸವ ಸಮಾರಂಭ ಕ್ರಿಯೇಟಿವ್ ಆವಿರ್ಭವವು " ವಿವಿಧತೆಯಲ್ಲಿ ಏಕತೆ " ಎಂಬ ಪರಿಕಲ್ಪನೆಯೊಂದಿಗೆ ಜನವರಿ 04 ರಂದು ವೈಭವಪೂರ್ಣವಾಗಿ
ನಡೆಯಿತು.
ಪ್ರೇಮಕವಿ ಎಂದೇ ಕರೆಯಲ್ಪಡುವ ಖ್ಯಾತ ಸಾಹಿತಿಗಳಾದ ಬಿ ಆರ್ ಲಕ್ಷ್ಮಣರಾವ್ ಹಾಗೂ ನಡೆದಾಡುವ ಗ್ರಂಥಾಲಯ ಎಂದೇ ಪ್ರಸಿದ್ಧರಾದ ಡಾ. ನಾ ಸೋಮೇಶ್ವರ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
ವಿದ್ಯಾರ್ಥಿಗಳ ಸಮ್ಮುಖದಲ್ಲಿ ಎರಡು ಹಂತಗಳಲ್ಲಿ ಸಂವಾದ ಕಾರ್ಯಕ್ರಮವು ಖ್ಯಾತ ನಿರೂಪಕ ಅವಿನಾಶ್ ಕಾಮತ್ ರವರ ಮುಖೇನ ನಡೆಸಲ್ಪಟ್ಟಿತು. ” ಕವಿತೆ ಹುಟ್ಟುವ ಸಮಯ ” ಸಂವಾದ ಕಾರ್ಯಕ್ರಮದಲ್ಲಿ ಬಿ ಆರ್ ಲಕ್ಷ್ಮಣರಾವ್ ರವರು ಸಂವಾದ ನಡೆಸುತ್ತಾ ವಿದ್ಯಾರ್ಥಿ ಸಮೂಹವನ್ನುದ್ದೇಶಿಸಿ ಹಾಡುಗಳ ನಿರಂತರತೆಗೆ ಕಾರಣ ಮುಂದಿನ ಪೀಳಿಗೆಯಾಗಿರುವ ವಿದ್ಯಾರ್ಥಿಗಳು ಎಂದರು. ಮಜಾ ಟಾಕೀಸ್ ಖ್ಯಾತಿಯ ಮೋಹನ್ ಕಾರ್ಕಳ ಮತ್ತು ತಂಡದವರಿಂದ ಬಿ ಆರ್ ಲಕ್ಷ್ಮಣರಾವ್ ವಿರಚಿತ ಕವಿತೆಗಳ ಗಾಯನ ಕಾರ್ಯಕ್ರಮ ಜರುಗಿತು.
ಪ್ರಖ್ಯಾತ ವೈದ್ಯ, ಕ್ವಿಜ್ ಮಾಸ್ಟರ್, ಲೇಖಕರು ಹಾಗೂ ಅಂಕಣಕಾರರಾದ ಡಾ. ನಾ ಸೋಮೇಶ್ವರರವರು ಸಂವಾದ ಕಾರ್ಯಕ್ರಮದಲ್ಲಿ ” ಪುಸ್ತಕ ಪ್ರೀತಿಯಿಂದ ಬದುಕು ಸಂಪ್ರೀತ ” ಎಂಬ ವಿಚಾರದ ಕುರಿತು ಮಾತನಾಡುತ್ತಾ ಮೆದುಳು, ಮನಸ್ಸು ಹಾಗೂ ಆತ್ಮಕ್ಕೆ ಸೂಕ್ತ ವ್ಯಾಯಾಮ ನೀಡುವುದು ಪುಸ್ತಕ ಮಾತ್ರ ಆದ್ದರಿಂದ ಪಠ್ಯವಾಗಲಿ, ಸಾಹಿತ್ಯವಾಗಲಿ ಪ್ರೀತಿಯಿಟ್ಟು ಓದಿದರೆ ಮಾತ್ರ ಗುರಿ ಮುಟ್ಟಲು ಸುಲಭಸಾಧ್ಯ ಎಂದರು.
“ವನಿತಾ ಸುಗ್ಗಿ” ಶೀರ್ಷಿಕೆಯಡಿಯಲ್ಲಿ ಕ್ರಿಯೇಟಿವ್ ಪುಸ್ತಕಮನೆ ವತಿಯಿಂದ 5 ಜನ ಲೇಖಕಿಯರ ಪುಸ್ತಕ ಬಿಡುಗಡೆಯಾಯಿತು. ಕ್ರಿಯೇಟಿವ್ ಪುಸ್ತಕ ಮನೆ ಕಾರ್ಕಳ ಹಾಗೂ ಮೂಡುಬಿದಿರೆ ಶಾಖೆಯಲ್ಲಿ ” ಪರಸ್ಪರ ” ಕಾರ್ಯಕ್ರಮದಲ್ಲಿ ಓದುಗ – ಲೇಖಕ ಜೊತೆಯಾಗುವ, ಪುಸ್ತಕಗಳಿಗೆ ಸಹಿ ಪಡೆಯುವ, ಸೆಲ್ಫಿ ತೆಗೆದುಕೊಳ್ಳುವ ವಿಶೇಷ ಅವಕಾಶವನ್ನು ಕಲ್ಪಿಸಲಾಗಿತ್ತು.
ಅಪರಾಹ್ನ 2.30ರಿಂದ 2023-24ನೇ ಶೈಕ್ಷಣಿಕ ಸಾಲಿನ “ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ” ಕಾರ್ಯಕ್ರಮ ನಡೆಯಿತು. ಉದ್ಘಾಟಕರಾಗಿ ಆಗಮಿಸಿದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ವಿ ಸುನಿಲ್ ಕುಮಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕ್ರಿಯೇಟಿವ್ ವಿದ್ಯಾರ್ಥಿಗಳ ಸಾಧನೆಯಿಂದ ಕಾರ್ಕಳ ತಾಲೂಕು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಪದವಿಪೂರ್ವ ವಿಭಾಗದ ಉಪನಿರ್ದೇಶಕರಾದ ಶ್ರೀ ಮಾರುತಿರವರು ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಪಠ್ಯ, ಪಠ್ಯೇತರ ವಿಭಾಗಗಳಲ್ಲಿ ಮುಂಚೂಣಿಯಲ್ಲಿದ್ದು, ಹೆಸರಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸೃಜನಾತ್ಮಕವಾಗಿ ಮಾರ್ಪಡಿಸುತ್ತಿರುವ ಸಂಸ್ಥೆ ಇನ್ನಷ್ಟು ಏಳಿಗೆಯನ್ನು ಕಾಣಲಿ ಎಂದು ಶುಭಹಾರೈಸಿದರು.
2023-24ನೇ ಶೈಕ್ಷಣಿಕ ಸಾಲಿನ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರಶಸ್ತಿ ವಿತರಣೆಯು ನಡೆಯಿತು. ಸಹ ಸಂಸ್ಥಾಪಕರಾದ ಡಾ. ಬಿ ಗಣನಾಥ ಶೆಟ್ಟಿ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ಸಂಸ್ಥಾಪಕ ವರ್ಗದವರು, ಎಲ್ಲಾ ಬೋಧಕ – ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್ ಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಮಯ ಸಂಜೆ 6:30 ರಿಂದ “ವಿವಿಧತೆಯಲ್ಲಿ ಏಕತೆ” ಪರಿಕಲ್ಪನೆಯ ‘ಕ್ರಿಯೇಟಿವ್ ಆವಿರ್ಭವ’ ವು ಬಹಳ ಸುಂದರವಾಗಿ ಮೂಡಿಬಂದು ಸಾಂಸ್ಕೃತಿಕ ಕಾರ್ಯಕ್ರಮವು ಸಾವಿರಾರು ಮಂದಿ ಪ್ರೇಕ್ಷಕರ ಮನಸೂರೆಗೊಂಡಿತು.