ಮಡಗಾವ್ (ಜ.19): ತುಳು, ಕನ್ನಡ ಎನ್ನುವ ಭಾಷಿಕವಾದ ಒಳ ಬಿನ್ನತೆ ಸಂಘಟನೆಯಲ್ಲಿ ಬರಬಾರದು. ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಪ್ರಾದೇಶಿಕ ಭಿನ್ನತೆಯನ್ನು ಮೀರಿ ಬಂಟ ಸಮುದಾಯದ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಶ್ರೀ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಗೋವಾದ ಲಕ್ಷ್ಮಿ ಎಂಪೈರ್ ಹೋಟೆಲ್ ನಲ್ಲಿ ಜನವರಿ 19 ರಂದು ಆಯೋಜಿಸಿದ ಗೋವಾ ಬಂಟರ ಸಂಘದ ರಜತ ಸಂಭ್ರಮ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜ್ಞಾನ ಸರೋವರ ರೆಸಿಡೆನ್ಸಿ ಸ್ಕೂಲ್ ನ ಆಡಳಿತ ನಿರ್ದೇಶಕ ಶ್ರೀ ಸುಧಾಕರ ಶೆಟ್ಟಿ ಮಾತನಾಡುತ್ತಾ ಬಂಟರು ಸ್ವಂತಿಕೆ ,ಸ್ವಾಭಿಮಾನದಡಿಯಲ್ಲಿ ಬದುಕಿದವರು ಹಾಗೂ ಸಂಘಟನಾ ಚತುರರು. ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಚಾಪನ್ನು ಮೂಡಿಸುವುದರ ಜೊತೆಗೆ ನಾಡಿನ ಕಲೆ, ಸಾಹಿತ್ಯ, ಸಾಂಸ್ಕೃತಿಕ ವಿಷಯಗಳಿಗೆ ತಮ್ಮದೆ ಆದ ಕೊಡುಗೆಯನ್ನು ನೀಡುತ್ತಾ ಬಂದವರು. ಬಂಟರು ಉದ್ಯೋಗಿಗಳಾಗುವುದಕ್ಕಿಂತ ಉದ್ಯೋಗದಾತರಾಗುವ ಮೂಲಕ ಸಾಮಾಜಿಕವಾಗಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡವರು ಎಂದು ಹೇಳಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಗೋವಾ ಬಂಟರ ಸಂಘದ ರಜತ ಸಂಭ್ರಮದ ಅಧ್ಯಕ್ಷರಾದ ಶ್ರೀ ಕಾವಡಿ ಸದಾಶಿವ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಅಭಿನಂದನಾ ನುಡಿಗಳನ್ನಾಡಿದ ಡಾ. ಗಣನಾಥ ಎಕ್ಕಾರು, ಚಲನಚಿತ್ರ ನಟರಾದ ಹರೀಶ್ ವಾಸು ಶೆಟ್ಟಿ ಮುಲುಂಡ್, ದಯಾನಂದ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಉಳ್ತುರು ಮೋಹನದಾಸ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಕಾರ್ಕಳ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವುದರ ಜೊತೆಗೆ ಜಗದೀಶ ಶೆಟ್ಟಿ ಪಳ್ಳಿ ದಂಪತಿಗಳಿಗೆ ಬಂಟ ಸಾದಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಸಂಘದ ಸ್ಥಾಪಕ ಅಧ್ಯಕ್ಷರಾದ ಜಯಕರ ಶೆಟ್ಟಿ, ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಶಶಿ ಶೆಟ್ಟಿ, ಶಶಿಧರ ನಾಯ್ಕ್, ಮುರಳಿ ಮೋಹನ ಶೆಟ್ಟಿ ಹಾಗೂ ಸಂಘದ ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಲತಾ ಶೆಟ್ಟಿ ಮತ್ತು ತಂಡ ಪ್ರಾರ್ಥನೆಗೈದು ಸಂಘದ ಪ್ರಧಾನ ಕಾರ್ಯದರ್ಶಿ ಸುನಿಲ್ ಶೆಟ್ಟಿ ಬೆಳ್ಳಂಪಳ್ಳಿ ಪ್ರಸ್ತಾವಿಸಿ ಸರ್ವರನ್ನು ಸ್ವಾಗತಿಸಿದರು. ಶ್ರೀ ರಾಘವ ಶೆಟ್ಟಿ ಕೊಡ್ಲಾಡಿ ಧನ್ಯವಾದ ಅರ್ಪಿಸಿ, ನಮ್ಮ ಕುಡ್ಲದ ಪ್ರಿಯ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.