ಪುತ್ತೂರು(ಫೆ. 07): ತಾಲೂಕಿನ ಮಾತ್ರವಲ್ಲದೆ ಹತ್ತೂರಲ್ಲೂ ಜನಮೆಚ್ಚುಗೆ ಪಡೆದ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ಶ್ರೀಲಕ್ಷ್ಮೀ ವೆಂಕಟ್ರಮಣ ದೇವರ ರಥೋತ್ಸವ ಫೆ. 4ರಂದು ವೈಭವದಿಂದ ನಡೆಯಿತು. ಪೂರ್ವಾಹ್ನ ರಥ ಪೂಜೆಯ ಬಳಿಕ ಶ್ರೀದೇವರ ಅಲಂಕೃತ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಬಲಿ ಹೊರಟು ರಥ ಪ್ರದಕ್ಷಿಣೆಯ ಬಳಿಕ ರಥಾರೋಹಣ ನಡೆದು ಭಕ್ತಗಣ ಸಂಭ್ರಮದಿ ನೋಡುತ್ತಿದ್ದಂತೆ ಬಾನೆತ್ತರದ ಆಗಸದಲ್ಲಿ ಗರುಡಗಳೆರಡು ಪ್ರತ್ಯಕ್ಷವಾಗಿ ರಥ ಮತ್ತು ದೇವಳದ ಸುತ್ತ ಪ್ರದಕ್ಷಿಣೆ ಗೈದವು.
ಬಳಿಕ ರಥದಲ್ಲಿ ಶ್ರೀ ದೇವರಿಗೆ ಪೂಜೆ ಆರತಿ ನಡೆಯುತ್ತಿದ್ದಂತೆ ಭಕ್ತರ ಗೋವಿಂದ ನಾಮ ಸಂಕೀರ್ತನೆಯೊಂದಿಗೆ ರಥವನ್ನು ಎಳೆದು ಪುನೀತರಾದರು.ನಂತರ ರಥದ ಬಳಿ ಬಟ್ಟಲು ಕಾಣಿಕೆ ನಡೆಯಿತು. ದೇವರು ರಥದಿಂದ ಇಳಿದು ದೇವಳದ ಸುತ್ತ ಪ್ರದಕ್ಷಿಣೆ ಬಂದ ಬಳಿಕ ಮಹಾಪೂಜೆ ನಡೆದು ಪ್ರಸಾದಾದಿಗಳ ವಿತರಣೆಯ ಬಳಿಕ ರಾತ್ರಿವರೆಗೂ ಅನವರತ ಮಹಾ ಅನ್ನ ಸಂತರ್ಪಣೆ ಜರುಗಿತು. ಸುಮಾರು 5 ಸಾವಿರ ಭಕ್ತರು ಅನ್ನಪ್ರಸಾದ ಭೋಜನ ಸ್ವೀಕರಿಸಿ ಕೃತಾರ್ಥರಾದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 5ರಿಂದ ಎಲ್. ಕೆ. ಧರಣ್ ಮಾಣಿ ಮತ್ತು ಬಳಗದವರಿಂದ ಭಕ್ತಿ ಸಂಗೀತ ಗಾಯನ ನಂತರ ಉಂಡೆಮನೆ ಶ್ರೀ ಕೃಷ್ಣ ಭಟ್ ಮತ್ತು ಬಳಗದವರಿಂದ ದಕ್ಷಾಧ್ವರ, ಗಿರಿಜಾಕಲ್ಯಾಣ ಯಕ್ಷಗಾನ ಬಯಲಾಟ ನಡೆಯಿತು. ತದನಂತರ ಶ್ರೀ ದೇವರ ಬಲಿ ಹೊರಟು ಗೋವಿಂದ ನಾಮ ಉದ್ಗೋಷದೊಂದಿಗೆ ರಥ ಪ್ರದಕ್ಷಿಣೆ ಮಾಡಿ, ರಥಾರೋಹಣ ನಡೆದು, ಸುಡುಮದ್ದು ಪ್ರದರ್ಶನದ ನಂತರ ಭಕ್ತರು ರಥದಗದ್ದೆಯಲ್ಲಿ ರಥವನ್ನು ಎಳೆದು ಪುನೀತರಾದರು. ಬಳಿಕ ಸಂಪಿಗೆ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆದು, ದೇವಳದ ಅಂಗಣದಲ್ಲಿ ಹಲವು ತರದ ಸಂಗೀತ ವಾದ್ಯಗಳ ಮತ್ತು ಮಂತ್ರ, ಭಜನೆ ಸುತ್ತಿನೊಂದಿಗೆ ದೇವರ ಬಲಿ ನಡೆದ ಬಳಿಕ ವಸಂತ ಕಟ್ಟೆಯಲ್ಲಿ ಪೂಜೆ,ಅಷ್ಠಾವಧಾನ ಸೇವೆ,ಬಟ್ಟಲು ಕಾಣಿಕೆ ನಡೆಯಿತು.
ಮಹಾಲಡ್ಡು ಹರಾಜು: ವರ್ಷಂಪ್ರತಿ ಜರಗುವ ಮಹಾಲಡ್ಡು ಹರಾಜು ಪ್ರಕ್ರಿಯೆಯಲ್ಲಿ ಈ ವರ್ಷ 27,777 ರೂಪಾಯಿಗೆ ಪೋಳ್ಯ ಶ್ರೀ ಅಣ್ಣಪ್ಪ ಭಟ್ ಇವರು ಪಡೆದುಕೊಂಡು ಅಂದಾಜು 10 ಕಿಲೋ ಗಾತ್ರದ ಮಹಾಲಡ್ಡನ್ನು ನೆರೆದ ಭಕ್ತರಿಗೆ ಹಂಚಿದರು.
ಗರುಡೋತ್ಸವ ಸೇವೆ : ತಿರುಪತಿ ತಿರುಮಲದಲ್ಲಿ ನಡೆಯುವ ಶ್ರೀಲಕ್ಷ್ಮೀ ವೆಂಕಟರಮಣ ದೇವರ ಗರುಡ ರಥೋತ್ಸವ ಸೇವೆ ಅಲ್ಲಿ ಬಿಟ್ಟರೆ ನಂತರ ನಡೆಯುವುದು ನಮ್ಮ ಪೋಳ್ಯ ಮಠದಲ್ಲಿ ಮಾತ್ರ.ಇಂತಹ ಸೇವೆಯು ಈ ಸಲ ಸುಮಾರು 110ರ ಆಂದಾಜು ನಡೆಯಿತು.ಗರುಡ ರಥೋತ್ಸವ ಸೇವೆಯ ಹರಕೆ ಹೊತ್ತ ಭಕ್ತಾದಿಗಳಿಂದ ಫೆಬ್ರವರಿ 02 ಮತ್ತು 03 ರಂದು ತಮ್ಮವರೊಂದಿಗೆ ಸೇರಿ ಶ್ರೀದೇವರ ಸಹಿತವಾಗಿ ಗರುಡರಥವನ್ನೆಳೆದು ಎಳೆದು ಧನ್ಯರಾದರು.
ಧೂಮವಾತಿ, ಗುಳಿಗ ನೇಮ : ಕೊನೆಯ ದಿನವಾದ ಫೆ. 5ರಂದು ಕ್ಷೇತ್ರ ಪಾಲ ದೈವಗಳಾದ ದೂಮಾವತಿ ಮತ್ತು ಗುಳಿಗ ದೈವದ ಹಾಗೂ ಎರಡು ಪರಿವಾರ ದೈವಗಳಿಗೆ ನೆಮೋತ್ಸವ ನಡೆಯಿತು.
ನಿರಂತರ ಊಟ ಉಪಹಾರ : ಕಳೆದ ನಾಲ್ಕು ದಿನಗಳಿಂದ ನಿತ್ಯ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆಯ ಕಾಫಿ, ರಾತ್ರಿಯ ಭೋಜನ ಸೇರಿ 12 ಸಾವೀರಕ್ಕಿಂತ ಮಿಕ್ಕಿ ಭಕ್ತರಿಗೆ ಸಂತರ್ಪಣೆ ನಡೆಯಿತು.