ಗಂಗೊಳ್ಳಿ(ಮೇ ,12) : ಹಳೆಯ ಸೋಲುಗಳ ಬಗ್ಗೆ ಚಿಂತಿಸುತ್ತ ಕೂರುವುದರ ಬದಲು ಮುಂದಿನ ಗೆಲುವುಗಳ ಬಗ್ಗೆ ಯೋಜನೆಯನ್ನು ಹಾಕಿಕೊಳ್ಳಬೇಕು. ಛಲ ಬದ್ಧತೆ ಮತ್ತು ಪರಿಶ್ರಮದಿಂದ ಹೊಸ ಚರಿತ್ರೆ ಸೃಷ್ಟಿಸಲು ಸಾಧ್ಯ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು.
ಅವರು ಕಲಾಶ್ರೀ ಶಿಕ್ಷಣ ಪ್ರೇಮಿಗಳ ಬಳಗದ ವತಿಯಿಂದ ಮೇಲ್ ಗಂಗೊಳ್ಳಿಯ ಅಂಬೇಡ್ಕರ್ ಭವನದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯಮಟ್ಟದಲ್ಲಿ ಎರಡನೇ ರಾಂಕ್ ಗಳಿಸಿದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಸುಶ್ಮಿತ ಎಸ್ ಗಾಣಿಗ, ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಅಗ್ರಸ್ಥಾನಿ ಕ್ಷಮಾ ಆರ್ ಆಚಾರ್ಯ, ಪಿಯುಸಿ ಯಲ್ಲಿ ಉತ್ತಮ ಸಾಧನೆ ಮಾಡಿದ ಜಯಶ್ರೀ ಮತ್ತು ಜ್ಯೋತಿಕಾ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ರಿಷಿಕೇಶ, ಜ್ಯೋತಿಕಾ, ಸಂಜನಾ ಖಾರ್ವಿ ಮತ್ತು ಭಾಸ್ಕರ್ ಇವರನ್ನು ಸನ್ಮಾನಿಸಲಾಯಿತು. ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಉಚಿತ ಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಉಪ ವಲಯ ಅರಣ್ಯಾಧಿಕಾರಿ ಕೆ ಸದಾಶಿವ ಶುಭ ಹಾರೈಸಿದರು. ಗಂಗೊಳ್ಳಿಯ ಗ್ರಾಮ ಪಂಚಾಯತ್ ಸದಸ್ಯ ಚಂದ್ರ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ತಬ್ರೇಜ್, ಕೆನರಾ ಬ್ಯಾಂಕಿನ ನಿವೃತ್ತ ಉದ್ಯೋಗಿ ಪ್ರಮೋದ್ ಗಾಣಿಗ, ಅಂಬೇಡ್ಕರ್ ಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೋಡು, ಕಲಾಶ್ರೀ ಶಿಕ್ಷಣ ಪ್ರೇಮಿ ಬಳಗದ ಅಧ್ಯಕ್ಷೆ ಸುಮಿತ್ರ ಈಶ್ವರ್, ಅರ್ಚನ ಮಹಿಳಾ ಮಂಡಲದ ಅಧ್ಯಕ್ಷೆ ಜ್ಯೋತಿ ಆನಂದ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆಪರೇಷನ್ ಸಿಂಧೂರ್ ಕಾರ್ಯಚರಣೆಯಲ್ಲಿ ನಿರತರಾಗಿರುವ ಭಾರತೀಯ ಸೈನಿಕರಿಗೆ ಶುಭ ಹಾರೈಕೆಗಳನ್ನು ಕೋರಿ ಪ್ರಾರ್ಥಿಸಿ ಹುತಾತ್ಮ ಯೋಧರಿಗೆ ರಿಗೆ ನಮನಗಳನ್ನು ಸಲ್ಲಿಸಲಾಯಿತು. ಕಲಾಶ್ರೀ ಶಿಕ್ಷಣ ಪ್ರೇಮಿಗಳ ಬಳಗದ ಗೌರವಾಧ್ಯಕ್ಷರಾದ ಈಶ್ವರ ಗಂಗೊಳ್ಳಿ ಅತಿಥಿಗಳನ್ನು ಸ್ವಾಗತಿಸಿದರು. ಶಂಕರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.