ಶಿರ್ವ(ಜೂ,06): ಕಸವನ್ನು ಮರುಬಳಕೆ ಮಾಡುವುದರ ಮೂಲಕ ಪರಿಸರ ಸಂರಕ್ಷಣೆ ಸಾಧ್ಯ ಎಂದು ಇನ್ನಂಜೆ ಗ್ರಾಮ ಪಂಚಾಯತು ಕಾರ್ಯದರ್ಶಿ ರೊ. ಚಂದ್ರಶೇಖರ್ ಸಾಲಿಯಾನ್ ನುಡಿದರು. ಅವರು ಶಿರ್ವ ಸಂತ ಮೇರಿ ಕಾಲೇಜಿನ ಯುವ ರೆಡ್ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ & ರೇಂಜರ್ಸ್ ಘಟಕ ಹಾಗೂ ರೋಟರಿ ಕ್ಲಬ್ ಶಿರ್ವ ಇದರ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಿದ ಮಳೆ ನೀರು ಕೊಯ್ಲು ಅರಿವು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಕಸವನ್ನು ಹಸಿ ಮತ್ತು ಒಣಕಸ ಎಂದು ಮೂಲದಲ್ಲಿಯೇ ಬೇರ್ಪಡಿಸಿ ಗೊಬ್ಬರ ತಯಾರಿಸುವ ವಿಧಾನವನ್ನು ತಿಳಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದ ಅವರು ಮಳೆ ನೀರಿನ ಸರಿಯಾದ ನಿರ್ವಹಣೆ ಮಾಡದಿರುವುದೇ ಇಂದು ಅನೇಕ ಪರಿಸರದಲ್ಲಿ ಉಂಟಾದ ಜಲಕ್ಷಾಮಕ್ಕೆ ಕಾರಣ ಎಂದು ಹೇಳುತ್ತಾ ಮಳೆ ನೀರಿನ ಕೊಯ್ಲು ಮತ್ತು ಜಲ ಮರು ಪೂರಣದ ಅಗತ್ಯತೆಯನ್ನು ನಿದರ್ಶನಗಳ ಸಹಿತ ವಿವರಿಸಿದರು ಮತ್ತು ಗ್ರಾಮಸ್ತರು ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಗ್ರಾಮಪಂಚಾಯತುಗಳಿAದ ಸಿಗುವ ಸಹಾಯಧನಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ರವರು ವಿಶ್ವಪರಿಸರ ದಿನದಂದು ಹಮ್ಮಿಕೊಂಡಿರುವ ಈ ಮಳೆ ನೀರಿನಕೊಯ್ಲು ಅರಿವು ಕಾರ್ಯಕ್ರಮವು ತುಂಬಾ ಔಚಿತ್ಯಪೂರ್ಣವಾಗಿದ್ದು, ಇದನ್ನು ನಾವು ಗಂಭೀರವಾಗಿ ಪರಿಗಣಿಸಿ ಕಾರ್ಯರೂಪಕ್ಕೆ ತರಬೇಕಾದ ಅಗತ್ಯ ಇದೆ ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ರೋವರ್ಸ & ರೇಂಜರ್ಸ್ ಘಟಕದ ನಿರ್ದೇಶಕರಾದ ಶ್ರೀ ಪ್ರಕಾಶ್ ಹಾಗೂ ಶ್ರೀಮತಿ ಸಂಗೀತಾ ಹೆಚ್ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಹಾಗೂ ಶಿರ್ವ ರೋಟರಿ ಕ್ಲಬ್ನ ಅಧ್ಯಕ್ಷ ರೊ. ಡಾ. ವಿಠ್ಠಲ್ ನಾಯಕ್ರವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಎನ್.ಎಸ್.ಎಸ್ ಘಟಕದ ನಾಯಕಿ ಕು. ಶ್ರೇಯಾ ಎಸ್ ನಾಯಕ್ ನಿರೂಪಿಸಿ, ಯೋಜನಾಧಿಕಾರಿ ಶ್ರೀ ಪ್ರೇಮನಾಥ್ ವಂದಿಸಿದರು.